ಪರ್ವತ ರೂಪಣೆ -
	ಪರ್ವತಗಳು ಹೇಗೆ ಮೈದೆಳೆದು ಬೆಳೆಯುತ್ತವೆ ಎನ್ನುವುದನ್ನು ಅಧ್ಯಯಿಸುವ ಶಾಸ್ತ್ರ (ಓರೊಜೆನಿ). ಭೂಮಿಯ ಮೇಲ್ಮೈ ಲಕ್ಷಣಗಳಲ್ಲಿ ಎದ್ದುತೋರುವವೆಂದರೆ ಪರ್ವತಗಳು. ಕಿರಿದಾದ ಮೇಲುಭಾಗದಿಂದ ಕೂಡಿರುವ ಉನ್ನತ ಪ್ರದೇಶಗಳಿಗೆ ಪರ್ವತಗಳೆಂದು ಹೆಸರು. ಎತ್ತರ ಮತ್ತು ಗಾತ್ರಗಳಲ್ಲಿ ಬಗೆಬಗೆಯ ಪರ್ವತಗಳಿವೆ. ಇವನ್ನು ಆಧರಿಸಿ ಮೊಟ್ಟೆ, ಗುಡ್ಡ ಬೆಟ್ಟ, ಪರ್ವತ, ಪರ್ವತಶ್ರೇಣಿ, ಪರ್ವತ ಸರಣಿ, ಪರ್ವತಸ್ತೋಮ ಎಂದು ಮುಂತಾಗಿ ಹೇಳುವುದುಂಟು. ಆದರೆ ಈ ಪದಗಳಿಗೆ ನಿಷ್ಕøಷ್ಟ ವೈಜ್ಞಾನಿಕಾರ್ಥ ನಿಗದಿಯಾಗಿಲ್ಲ. ಮೇಲುನೋಟಕ್ಕೆ ಎಲ್ಲ ಪರ್ವತಗಳೂ ಒಂದೇ ರೀತಿಯಾಗಿ ಕಂಡರೂ ಅವುಗಳ ಆಕಾರ, ರಚನೆ ಮತ್ತು ಅವು ರೂಪುಗೊಂಡ ವಿಧಾನಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಅವು ರೂಪುಗೊಂಡುದರ ಆಧಾರದ ಮೇಲೆ ಮುಖ್ಯವಾಗಿ ಮೂರು ವಿಧವಾದ ಪರ್ವತಗಳನ್ನು ಕಾಣಬಹುದು. ಮೊದಲನೆಯದಾಗಿ ಜ್ವಾಲಾಮುಖಿಯಿಂದ ಹೊರಸೂಸುವ ಲಾವಾರಸದ ಸಂಚಯನದಿಂದ ಉಂಟಾದ ಮೌಂಟ್ ಎಟ್ನಾ, ಕ್ರಕಟೋವಾ ಮುಂತಾದವು. ಇವುಗಳಿಗೆ ಜ್ವಾಲಾಮುಖಿ ಪರ್ವತಗಳೆಂದು ಹೆಸರು. ಎರಡನೆಯದಾಗಿ ಭಾರತ ಪರ್ಯಾಯ ದ್ವೀಪದ ಆರಾವಳಿ ಪರ್ವತವೊಂದನ್ನು ಬಿಟ್ಟು ಉಳಿದೆಲ್ಲ ಪರ್ವತಗಳು ಭೂವ್ಯಾಪಾರ ಕರ್ತೃಗಳ ಕಾರ್ಯಾಚರಣೆಯ ಅಂಗವಾದ ಶಿಥಿಲೀಕರಣದಿಂದ ಉಂಟಾದವು. ಆದ್ದರಿಂದ ಇವನ್ನು ಶೇಷ ಪರ್ವತಗಳೆಂದು ಕರೆಯುತ್ತಾರೆ. ಆದರೆ ಪ್ರಪಂಚದ ಬಹುತೇಕ ಪರ್ವತಗಳು ಭೂಮಿಯಲ್ಲಿ ಉಂಟಾಗುವ ಚಲನೆಗಳಿಂದ ಉದ್ಭವಿಸುತ್ತವೆ. ಇವು ಭೂಚಲಜನ್ಯ ಪರ್ವತಗಳು. ಈ ಕೊನೆಯವುಗಳಲ್ಲಿ ಮತ್ತೆ ಮೂರು ವಿಧಾನಗಳಿವೆ. ಕೆಲವು ಜಲಜಶಿಲಾ ನಿಕ್ಷೇಪಗಳೂ ಪಾಶ್ರ್ವಒತ್ತಡಕ್ಕೆ ಒಳಗಾದಾಗ ಉಂಟಾಗುವ ಮಡಿಕೆಗಳಿಂದ ಉದ್ಭವಿಸಿದರೆ ಮತ್ತೆ ಕೆಲವು ಶಿಲಾಸ್ತರದಿಂದಲೂ ಇನ್ನು ಕೆಲವು ಶಿಲಾಪಾಕ ಅಂತಸ್ಸರಣದಿಂದಲೂ ಉಂಟಾಗುತ್ತವೆ. ಅವನ್ನು ಅನುಕ್ರಮವಾಗಿ ಮಡಿಕೆ ಪರ್ವತ, ಸ್ತರಭಂಗ ಪರ್ವತ ಮತ್ತು ಗುಮ್ಮಟ ಪರ್ವತಗಳೆಂದು ಕರೆಯುತ್ತಾರೆ. ಮೇಲೆ ತಿಳಿಸಿದ ಪರ್ವತಗಳ ಶಿಲಾಸಂಯೋಜನೆ, ರಚನೆ ಸರಳವಾಗಿದ್ದು ಅವು ರೂಪುಗೊಂಡ ವಿಧಾನ ಅಷ್ಟೇನೂ ತೊಡಕಾಗಿಲ್ಲ. ಆದರೆ ಪ್ರಪಂಚದ ಅತ್ಯುನ್ನತವೆಂದು ಹೆಸರಾಂತ ಹಿಮಾಲಯ, ಆಲ್ಪ್ಸ್, ರಾಕೀಸ್, ಆಂಡೀಸ್ ಮುಂತಾದ ಪರ್ವತಗಳು ಮೇಲೆ ತಿಳಿಸಿದ ಯಾವ ವರ್ಗಕ್ಕೂ ಸೇರುವುದಿಲ್ಲ. ಕಾರಣ ಇವುಗಳ ಶಿಲಾಸಂಯೋಜನೆ, ಶಿಲಾರಚನೆಗಳು ಬಲು ಕ್ಲಿಷ್ಟ. ಇವುಗಳಲ್ಲಿ ನಾನಾರೀತಿಯ ಮಡಿಕೆಗಳು, ಸ್ತರಭಂಗಗಳು ಮತ್ತು ಶಿಲಾಪಾಕ ಅಂತಸ್ಸರಣಗಳು ಸೇರಿ ಇವುಗಳ ನಿರ್ಮಾಣವಿಧಾನ ಭೂವಿಜ್ಞಾನಿಗಳಿಗೆ ಒಂದು ಸವಾಲಾಗಿದೆ. ಇಂಥ ಪರ್ವತಗಳನ್ನು ಸಂಮಿಶ್ರಣ ಅಥವಾ ಸಂಕೀರ್ಣ ಪರ್ವತಗಳೆಂದು ಕರೆಯುತ್ತಾರೆ. ಈ ವರ್ಗಕ್ಕೆ ಸೇರಿದ ಪರ್ವತಗಳು ಒಂದೇ ಸಾರಿ ಈ ಉನ್ನತಿಯನ್ನು ಮುಟ್ಟಲಿಲ್ಲ. ಇವು ದೀರ್ಘಕಾಲಾವಧಿಯಲ್ಲಿ ಹಂತಹಂತವಾಗಿ ಬೆಳೆದು ಈಗಿನ ಸ್ಥಿತಿಯನ್ನು ಐದಿವೆ. ಈ ಸಂಕೀರ್ಣ ಪವರ್ತಗಳ ನಿರ್ಮಾಣದಲ್ಲಿ ಮೂರು ಹಂತಗಳನ್ನು ಗುರುತಿಸಬಹುದು. ಮೊದಲನೆಯ ಹಂತದಲ್ಲಿ ಜಲಜಶಿಲೆಗಳು ಅಗಾಧ ಪ್ರಮಾಣದಲ್ಲಿ ಸಂಚಯನಗೊಳ್ಳಲು ಬೇಕಾದಂಥ ತಗ್ಗು ಪ್ರದೇಶಗಳ ನಿರ್ಮಾಣವಾದರೆ, ಎರಡನೆಯ ಹಂತದಲ್ಲಿ ಈ ಜಲಜಶಿಲಾನಿಕ್ಷೇಪಗಳಲ್ಲಿ ಬೃಹತ್ ಭೂಚಲನೆಗಳಿಂದ ನಾನಾ ರೀತಿಯ ಮಡಿಕೆಗಳು ಮತ್ತು ಸ್ತರಭಂಗಗಳು ಉಂಟಾಗಿ ಕ್ಲಿಷ್ಟತರ ರಚನೆಯನ್ನು ಪಡೆಯುತ್ತವೆ. ಶಿಲಾಪಾಕ ಅಂತಸ್ಸರಣದ ತರುವಾಯ ಈ ಹಂತ ಕೊನೆಗೊಳ್ಳುತ್ತದೆ. ಆದ್ದರಿಂದಲೆ ಎಲ್ಲ ಸಂಕೀರ್ಣ ಪರ್ವತಗಳ ತಿರುಳು ಭಾಗಗಳು ಅಗ್ನಿಶಿಲೆಗಳಿಂದಾದ ಕಣಶಿಲೆಗಳಿಂದ ಕೂಡಿರುವುದಾಗಿದೆ. ಮೂರನೆಯ ಅಥವಾ ಕೊನೆಯ ಹಂತದಲ್ಲಿ ಈ ರೀತಿ ವಿರೂಪಗೊಂಡ ಶಿಲಾಸ್ತೋಮ ಸಮುದ್ರ ಮಟ್ಟದಿಂದ ಮೇಲೊಗೆಯಲ್ಪಟ್ಟು ಉನ್ನತ ಪರ್ವತಗಳಾಗುತ್ತವೆ.  ಈ ಸಂಕೀರ್ಣ ಪರ್ವತಗಳ ಉತ್ಪತ್ತಿ ಭೂವಿಜ್ಞಾನದಲ್ಲಿ ಇನ್ನೂ ವಿವಾದಾಸ್ಪದ ವಿಷಯ. ವಿಜ್ಞಾನಿಗಳು ಇವು ರೂಪುಗೊಂಡ ರೀತಿಯನ್ನು ಕುರಿತು ವಿಭಿನ್ನ ವಾದಗಳನ್ನು ಮಂಡಿಸಿದ್ದಾರೆ.
(ಜಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ